ಬಹಾಲ್
	ಮಹಾರಾಷ್ಟ್ರ ರಾಜ್ಯದ ಪೂರ್ವ ಖಾನ್‍ದೇಶ ಜಿಲ್ಲೆಯಲ್ಲಿರುವ ತಾಮ್ರಶಿಲಾಯುಗದ ಒಂದು ನೆಲೆ. ಪ್ರವರಾನದಿಯ ಉಪನದಿ ಗೀರ್ನಾ ನದಿ ದಂಡೆಯಲ್ಲಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯವರು 1952ರಲ್ಲಿ ಈ ನೆಲೆಯನ್ನು ಪತ್ತೆಹಚ್ಚಿದರು. 1957ರಲ್ಲಿ ಇಲ್ಲಿ ಮಾಡಿದ ಉತ್ಖನನಗಳಿಂದ ಇದು ಮಧ್ಯ-ಪಶ್ಚಿಮ ಭಾರತದಲ್ಲಿ ಪ್ರಸರಿಸಿದ್ದ ತಾಮ್ರಶಿಲಾಯುಗ ಸಂಸ್ಕøತಿಯ ನೆಲೆಯೆಂದು ತಿಳಿದುಬಂತು. ಈ ಯುಗದ ಸಾಂಸ್ಕøತಿಕ ಅವಶೇಷಗಳನ್ನು ಎರಡು ಹಂತಗಳಾಗಿ ವಿಭಜಿಸಲಾಗಿದೆ. ಮೊದಲ ಹಂತದಲ್ಲಿ ಕರ್ನಾಟಕದ ಬ್ರಹ್ಮಗಿರಿ ನೆಲೆಯಲ್ಲಿ ಸಿಕ್ಕುವಂಥ ಅವಶೇಷಗಳು ದೊರಕಿವೆ. ಅಲ್ಲದೆ ಬೆರಳು ಗುರುತು ಮತ್ತು ಧಾರ್ಮಿಕ ಉದ್ದೇಶಗಳಿಗಾಗಿಯೋ ಆಟಿಕೆಗಳಾಗಿಯೋ ಬಳಸುತ್ತಿದ್ದ ಸುಟ್ಟ ಮಣ್ಣಿನ ಗೊಂಬೆಗಳು ಹಾಗೂ ತೆಳುವಾದ ಬೂದುಬಣ್ಣದ ಅಂಚುಗಳಲ್ಲಿ ಕೆಂಪು ಬಣ್ಣದ ಲೇಪನವಿದ್ದ ಮಡಕೆ ಚೂರುಗಳು ಸಹ ದೊರಕಿದ್ದು ವರ್ಣ ಚಿತ್ರಿತ ಕುಂಭಗಳ ಉಪಯೋಗವಿತ್ತೆಂದು ತಿಳಿದುಬರುತ್ತದೆ.

	ಎರಡನೆಯ ಹಂತದಲ್ಲಿ ತಿರುಗುಚಕ್ರದ ಮೇಲೆ ತೆಳುವಾಗಿ ಮಾಡಿದ ಕೆಂಪು ಮಣ್ಣಿನ ತೆಳುಪಾತ್ರೆಗಳ ಬಳಕೆ ಕಂಡುಬಂದಿದೆ. ಕಪ್ಪುಬಣ್ಣದ ಅಡ್ಡರೇಖೆಗಳು, ಅವುಗಳ ನಡುವೆ ವಜ್ರ, ತ್ರಿಕೋಣ, ಏಣಿ ಹಾಗೂ ಲತಾಪುಷ್ಪಗುಚ್ಛಗಳು, ವಿರಳವಾಗಿ ಪ್ರಾಣಿ ಪಕ್ಷಿಗಳು, ಜಿಂಕೆ ಮತ್ತು ಕುದುರೆಯಂಥ ಪ್ರಾಣಿಚಿತ್ರಗಳ ಅಲಂಕರಣ ವಿನ್ಯಾಸಗಳಿದ್ದ ತೆಳು ಕೆಂಪು ಮಣ್ಣುಪಾತ್ರೆಗಳನ್ನು ಕಾಣಬಹುದು. ಗುಜರಾತಿನ ರಂಗಪುರ ನೆಲೆಯಲ್ಲಿ ದೊರಕುವಂಥ ಹೊಳಪಿನ ಕೆಂಪು ಮಣ್ಣು ಪಾತ್ರೆಗಳ ತುಣುಕುಗಳು ಸಹ ದೊರಕಿವೆ. ಈ ಸಂಸ್ಕøತಿಯ ಪ್ರಮುಖ ನೆಲೆಗಳಾದ ನಾಸಿಕ್ ಮತ್ತು ಜೋರ್ವೆ ನೆಲೆಗಳಲ್ಲಿ ದೊರಕುವಂಥ ಚೂಪಾದ ಏಣುಗಳುಳ್ಳ ಬಟ್ಟಲುಗಳು ಮತ್ತು ನಳಿಕೆಗಳಿದ್ದ ಪಾತ್ರೆಗಳು ಸಹ ಇಲ್ಲಿ ಕಂಡುಬಂದಿವೆ. ಸೂಕ್ಷ್ಮಶಿಲಾಯುಧಗಳು, ವಿರಳವಾಗಿ ತಾಮ್ರದ ಉಪಕರಣಗಳು, ಸುಟ್ಟ ಮಣ್ಣಿನಿಂದ ಮಾಡಿದ ಬಾಚಣಿಗೆಗಳು, ಸಾಣೆ ಕಲ್ಲು ಮುಂತಾದವು ಬಳಕೆಯಲ್ಲಿದ್ದ ಆ ಕಾಲವನ್ನು ಕ್ರಿ.ಪೂ.ಸು. 1500ರಿಂದ 800 ವರ್ಷಗಳೆಂದು ಹೇಳಲಾಗಿದೆ.

	ಗೀರ್ನಾ ನದಿಯ ಮತ್ತೊಂದು ದಂಡೆಯಲ್ಲಿರುವ ತೆಕ್ವಾಡಾ ನೆಲೆಯಲ್ಲಿ ದೊರಕಿರುವ ಸಮಾಧಿಗಳಿಂದ ಅವರ ಶವ ಸಂಸ್ಕಾರ ಪದ್ಧತಿ ತಿಳಿದು ಬರುತ್ತದೆ. ದೊಡ್ಡ ಶವಜಾಡಿಗಳಲ್ಲಿ ಸತ್ತವರನ್ನು ಸಂಸ್ಕಾರ ಸಾಮಾಗ್ರಿಗಳೊಂದಿಗೆ ಹೂತಿಡುತ್ತಿದ್ದರು. ಆ ನೆಲೆಯಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ತಾಮ್ರ ಶಿಲಾಯುಗ ಸಂಸ್ಕøತಿ ಮತ್ತು ಅನಂತರ ಕಾಲದ ಬೃಹಚ್ಛಿಲಾ ಸಂಸ್ಕøತಿಗಳ ಸಂಪರ್ಕ ಸೂಚಿಸುವ ಗ್ರಾಫಿಟಿ ಚಿಹ್ನೆಗಳೊಡಗೂಡಿದ ಕಪ್ಪು ಮತ್ತು ಕೆಂಪು ಬಣ್ಣದ ಮಣ್ಣು ಪಾತ್ರೆಗಳ ಬಳಕೆ.

	ಎರಡನೆಯ ಹಂತದ ತಾಮ್ರಶಿಲಾಯುಗದ ಕಾಲದಲ್ಲಿ ಕಪ್ಪು ಮತ್ತು ಕೆಂಪು ಬಣ್ಣದ ಮಣ್ಣುಪಾತ್ರೆಗಳ, ಕಬ್ಬಿಣದ ಆಯುಧೋಪಕರಣಗಳ ವ್ಯವಸಾಯ ಸಾಮಗ್ರಿಗಳ ಬಳಕೆ ಗಮನಾರ್ಹ. ಇತಿಹಾಸ ಪ್ರಾರಂಭ ಕಾಲದಲ್ಲಿ ಭಾರತಾದ್ಯಂತ ಬಳಕೆಯಲ್ಲಿದ್ದ ಗ್ರಾಮೀಣ ಸಂಸ್ಕøತಿಯ ಹಂತಕ್ಕೆ ಸೇರುವ ಈ ಕಾಲವನ್ನು ಕ್ರಿ.ಪೂ. 600ರಿಂದ 30 ಎಂದು ಊಹಿಸಲಾಗಿದೆ. ಅನಂತರ ಕಾಲದ ಸಂಸ್ಕøತಿಯ ಕುರುಹುಗಳೂ ಅ ನೆಲೆಯಲ್ಲಿ ದೊರಕಿವೆ.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ